ಎಡಿಸನ್, ಥಾಮಸ್ ಆಲ್ವ
	1847-1931. ಅಮೆರಿಕದ ಖ್ಯಾತ ಸಂಶೋಧಕ. 2,500ಕ್ಕೂ ಮಿಕ್ಕ ವಿಶಿಷ್ಟ ಸಂಶೋಧನೆಗಳನ್ನು ಮಾಡಿದ ಖ್ಯಾತಿ ಇವನದು. ಜನನ ಅಮೆರಿಕದ ಒಹಾಯೊ ಪ್ರಾಂತ್ಯದ ಮಿಲಾನ್ ಎಂಬಲ್ಲಿ. ತಂದೆ ಹಾಲೆಂಡಿನವ, ತಾಯಿ ಸ್ಕಾಟ್ಲೆಂಡಿನವಳು. ಈತನ ತಂದೆ ತಾಯಿಗಳು ಇವನ ಏಳನೆಯ ವರ್ಷದಲ್ಲಿ ಮಿಲಾನ್ ಪಟ್ಟಣದಿಂದ ಮಿಚಿಗನ್ ಪ್ರಾಂತ್ಯದ ಹ್ಯೂರನ್ನಿಗೆ ಬಂದು ನೆಲೆಸಿದರು. ಅಲ್ಲಿನ ಶಾಲೆಯೊಂದರಲ್ಲಿ ನಡೆದ ಈತನ ಶಿಕ್ಷಣ ಕೇವಲ ಮೂರು ತಿಂಗಳ ಅವಧಿಯದು. ಮನೆಯಲ್ಲಿ ತಾಯಿಯಿಂದಲೇ ಹೆಚ್ಚಿನ ಪಾಠ. ಬಾಲ್ಯದಿಂದಲೂ ಇವನಿಗೆ ಪ್ರಯೋಗ ವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿಯಿದ್ದು ಮನೆಯ ನೆಲಮಾಳಿಗೆಯನ್ನೇ ತನ್ನ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದ್ದ. ಪ್ರಯೋಗಗಳ ಖರ್ಚಿಗಾಗಿ ತನ್ನ 12ನೆಯ ವರ್ಷದಲ್ಲಿ ಪೋರ್ಟ್ ಹ್ಯೂರನ್ - ಡಿಟ್ರಾಯ್ಟ್‍ಗಳ ನಡುವಿನ ಗ್ರ್ಯಾಂಡ್ ಟ್ರಂಕ್ ರೈಲ್ವೆಯಲ್ಲಿ ಥಾಮಸ್ ಪತ್ರಿಕೆಯನ್ನು ಮಾರಾಟಮಾಡಿ ಹಣ ಸಂಪಾದಿಸುತ್ತಿದ್ದ. ತನ್ನ 15ನೆಯ ವರ್ಷದ ಅನಂತರ ಬೇರೆ ಬೇರೆ ಪಟ್ಟಣಗಳಲ್ಲಿ ಟೆಲಿಗ್ರಾಫ್ ಅಪರೇಟರ್ ಆಗಿ ಕೆಲಸ ಮಾಡಿಯೂ ಹಣ ಗಳಿಸುತ್ತಿದ್ದ. ವಿರಾಮದ ವೇಳೆಯಲ್ಲಿ ಅಧ್ಯಯನ ಮತ್ತು ಪ್ರಯೋಗಗಳನ್ನು ನಡೆಸುತ್ತಿದ್ದುದುಂಟು. ಅಲ್ಲಿಂದ ಮುಂದೆ ಗ್ರಾಂಡ್-ಟ್ರಂಕ್ ಹೆರಾಲ್ಡ್ ಎಂಬ ಪತ್ರಿಕೆ ಹೊರಡಿಸಿ, ಅದಕ್ಕೆ ತಾನೇ ಸಂಪಾದಕ, ಮುದ್ರಕ ಮತ್ತು ಮಾರಾಟಗಾರನಾಗಿದ್ದ. ಈ ರೈಲ್ವೆಗೆ ಸೇರಿದ್ದ 400 ಮಂದಿ ಕೆಲಸಗಾರರು ಮತ್ತು ಪ್ರಯಾಣಿಕರೇ ಇವನ ಗ್ರಾಹಕರಾಗಿದ್ದರು. ರೈಲುಗಾಡಿಯ ಡಬ್ಬಿಯೊಂದನ್ನೇ ಮುದ್ರಣಾಲಯ ಮತ್ತು ಪ್ರಯೋಗಶಾಲೆಯನ್ನಾಗಿರಿಸಿಕೊಂಡಿದ್ದ. ಒಮ್ಮೆ ಅವನ ಆ ಡಬ್ಬಿಗೆ ಬೆಂಕಿ ಬಿದ್ದು ಅಲ್ಲಿದ್ದ ರಂಜಕವೆಲ್ಲವೂ ಹತ್ತಿಕೊಂಡು ಉರಿದು ಡಬ್ಬಿ ಹಾಳಾದ ಕಾರಣ, ಆ ಡಬ್ಬಿಯ ಮೇಲ್ವಿಚಾರಕ ಎಡಿಸನ್ನನನ್ನು ಆತನ ಕಿವಿ ಹಿಂಡಿ ಡಬ್ಬಿಯ ಹೊರ ಹಾಕಿದ. ಇದರಿಂದಾಗಿ ಎಡಿಸನ್ ಕಿವುಡನಾದ. 1867ರಲ್ಲಿ ಸ್ಟೇಷನ್ ಮಾಸ್ತರೊಬ್ಬರ ಮಗುವೊಂದನ್ನು ರೈಲು ಅಪಘಾತದಿಂದ ಪಾರುಮಾಡಿದ. ತನ್ನ ಮಗುವನ್ನು ರಕ್ಷಿಸಿದ ಕೃತಜ್ಞತೆಗೆ ಆ ಸ್ಟೇಷನ್ ಮಾಸ್ಟರ್ ಎಡಿಸನ್ನನಿಗೆ ತಾರ್‍ಯಂತ್ರದ ತಂತ್ರವನ್ನು ತಿಳಿಸಿಕೊಟ್ಟ. ಇದರಿಂದಾಗಿ ತಾರ್‍ಯಂತ್ರದ ಕೆಲಸದಲ್ಲೇ ಎಡಿಸನ್ ಮುಂದುವರಿದು ಸ್ವಯಂಚಾಲಿತ ತಾರ್‍ಯಂತ್ರವನ್ನು ರಚಿಸಿದ. 1868ರಲ್ಲಿ ವಿದ್ಯುಚ್ಚಾಲಿತ ಮತ ದಾಖಲೆಯಂತ್ರಕ್ಕೆ (ಎಲೆಕ್ಟ್ರಿಕಲ್ ವೋಟ್ ರೆಕಾರ್ಡರ್) ತನ್ನ ಏಕಸ್ವವನ್ನು ಪಡೆದುಕೊಂಡ. 

	ಮುಂದೆ ಕೆಲವು ಕಾಲಾನಂತರ, ನಿರುದ್ಯೋಗಿಯಾಗಿ ನ್ಯೂಯಾರ್ಕಿಗೆ ಬಂದು ಗೋಲ್ಡ್ ಇಂಡಿಕೇಟರ್ ಎಂಬ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಅಲ್ಲಿ ಒಂದು ಯಂತ್ರದ ರಿಪೇರಿ ಕೈಗೊಂಡು ತನ್ನ ಕೌಶಲಪ್ರದರ್ಶನ ಮಾಡಿದನಾಗಿ ಆ ಕಂಪನಿಯವರು ಅವನನ್ನೇ ತಮ್ಮ ಕಂಪನಿಯ ವಿದ್ಯುತ್‍ಕೇಂದ್ರವಿಭಾಗದ ಮೇಲ್ವಿಚಾರಕನನ್ನಾಗಿ ನೇಮಿಸಿಕೊಂಡರು. ಅಲ್ಲಿ ಗೋಲ್ಡ್‍ಪ್ರಿಂಟರ್ ಎಂಬ ಯಂತ್ರವನ್ನು ರಚಿಸಿ ಮುಂದೆ ತಾನೇ ಖಾಸಗಿ ತಂತಿ-ಟಪಾಲು ವ್ಯವಸ್ಥೆಯನ್ನು ಪ್ರಾರಂಭಿಸಿದ. ವೆಸ್ಟರ್ನ್ ಯೂನಿಯನ್ ಎಂಬ ಸಂಸ್ಥೆ ಈ ಯಂತ್ರವನ್ನು 40,000 ಡಾಲರುಗಳನ್ನು ಕೊಟ್ಟು ಕೊಂಡಿತು. ಬಂದ ಹಣದಿಂದ ಎಡಿಸನ್ ನ್ಯೂಜರ್ಸಿಯ ನೇವಾರ್ಕದಲ್ಲಿ ತನ್ನದೇ ಆದ ಕಾರ್ಯಾಗಾರವೊಂದನ್ನು ಸ್ಥಾಪಿಸಿದ. ಇಲ್ಲಿ ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸುದ್ದಿಗಳನ್ನು ತಂತಿಯ ಮೂಲಕ ಕಳುಹಿಸುವ ವಿಧಾನವನ್ನು ಕಂಡುಹಿಡಿದ. ಇದಾದ ಅನಂತರ ಸ್ಟಾಕ್ ಟಿಕರ್ಸ್, ಡೂಪ್ಲೆಕ್ಸ್, ಕ್ಸಾಡ್ರೂಪ್ಲೆಕ್ಸ್ ಮತ್ತು ಸ್ವಯಂಚಾಲಿತ ಟೆಲಿಗ್ರಾಫ್ ವ್ಯವಸ್ಥೆಗಳು ಮತ್ತು ವಿದ್ಯುತ್ ಲೇಖಣಿ - ಇವು ಈತ ರೂಪಿಸಿ, ರಚಿಸಿದ ಇತರ ಯಂತ್ರ ಸಾಧನಗಳು. 1876ರಲ್ಲಿ ಮೆನೋಪಾರ್ಕಿನ ವಿಶ್ವವಿಖ್ಯಾತ ಪ್ರಯೋಗಶಾಲೆಯನ್ನು ಸ್ಥಾಪಿಸಿದ. 1877-78ರಲ್ಲಿ ಈತ ಕಂಡುಹಿಡಿದ ಕಾರ್ಬನ್ ಟ್ರಾನ್ಸ್‍ಮಿಟರ್ ಯಂತ್ರದಿಂದಾಗಿ ಅಲೆಕ್ಸಾಂಡರ್ ಬೆಲ್‍ನ ಟೆಲಿಫೋನಿನ ಸುಧಾರಣೆ ಸಾಧ್ಯವಾಯಿತು. ಇದಾದ 10 ವರ್ಷಗಳ ಅನಂತರ ಇದೇ ದಿಶೆಯಲ್ಲಿ ಬಂದ ಮತ್ತೊಂದು ಯಂತ್ರ ಎಲೆಕ್ಟ್ರೋಮೊಟೋಗ್ರಾಫ್, ಫೋನೋಗ್ರಾಫ್ ವ್ಯವಸ್ಥೆಯಲ್ಲಿ ಈತ ನಡೆಸಿದ ಸುಧಾರಣೆಗಳಿಂದಾಗಿ ಮೆನೋಪಾರ್ಕಿನ ಮಾಂತ್ರಿಕನೆಂಬುದಾಗಿ ಇವನು ಖ್ಯಾತಿಗೊಂಡ. ಫೋನೋಗ್ರಾಫ್ ಅಥವಾ ಮಾತನಾಡುವ ಯಂತ್ರವನ್ನೂ ಈತ ಸುಧಾರಿಸಿದ. ಧ್ವನಿಯನ್ನು ಕೇವಲ ಮುದ್ರಿಸುವುದಲ್ಲದೆ, ಪುನರ್ ನುಡಿಸುವುದರ ಬಗ್ಗೆಯೂ ಶ್ರಮಿಸಿದ. ಕಚೇರಿಗಳಲ್ಲಿ ಬಳಸುವ ಉಕ್ತಲೇಖನಯಂತ್ರ (ಎಡಿಪೋನ್) ಈತನ ಸಂಶೋಧನೆಯ ಫಲವೇ. 1879ರ ಅಕ್ಟೋಬರಿನಲ್ಲಿ ಪ್ರಜ್ವಲನ ದೀಪವೊಂದನ್ನು (ಇನ್‍ಕ್ಯಾಂಡಿಸೆಂಟ್ ಲ್ಯಾಂಪ್) ಕಂಡುಹಿಡಿದು, ಅದು 40 ಗಂಟೆಗಳಿಗೂ ಹೆಚ್ಚು ಕಾಲ ಉರಿಯುವಂತೆ ಅದಕ್ಕೆ ವಿಶೇಷ ರೀತಿಯ ಮಾರ್ಪಾಡುಗಳನ್ನು ಮಾಡಿದ ಖ್ಯಾತಿ ಇವನದು. ವಿದ್ಯುದುತ್ಪಾದಕದಿಂದ (ಎಲೆಕ್ಟ್ರಿಕ್ ಡೈನಮೊ) ಹಿಡಿದು ವಿದ್ಯುತ್‍ಬಲ್ಬಿನವರೆಗಿನ ಸಮಗ್ರ ಸಾಮಗ್ರಿಗಳ ಸಂಘಟನೆಯನ್ನು ಎಡಿಸನ್ ಸಿದ್ಧಪಡಿಸಿದ. ಇದೇ ವೇಳೆಗೆ ಎಡಿಸನ್-ಪರಿಣಾಮ, ಎಲೆಕ್ಟ್ರಾನ್ ಮುಂತಾದುವುಗಳ ಬಗ್ಗೆ ಶೋಧನೆ ನಡೆಸಿ, ಮುಂದೆ ವೈರ್‍ಲೆಸ್ ರೇಡಿಯೋಗಳ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟ. 1891-1900ರ ವರೆಗೂ ಕಬ್ಬಿಣದ ಅದುರುಗಳ ಸಾರೀಕರಣಕ್ಕೆ ಕಾಂತೀಯ ವಿಧಾನವೊಂದನ್ನು ರೂಪಿಸುವ ಕಾರ್ಯದಲ್ಲಿ ನಿರತನಾದ. 1900-1910ರ ವರೆಗೂ ನಡೆದ ಈತನ ಸಂಶೋಧನೆ ಒಂದು ನೂತನ ವಿದ್ಯುತ್‍ಕೋಶವೊಂದರ ಅಭಿವೃದ್ಧಿಗೆ ಸಂಬಂಧಿಸಿದ್ದು. ಕೈನೆಟೋಸ್ಕೋಪಿಕ್ ಕ್ಯಾಮೆರಾ ಎಂಬ ಬಿಂಬಗ್ರಾಹಿಯನ್ನು 1891ರಲ್ಲಿ ರಚಿಸಿದ. ಅದು ಕೇವಲ ಅದು ಸಣ್ಣ ಪೆಟ್ಟಿಗೆಯಾಕಾರದಲ್ಲಿದ್ದು, ಅದರೊಳಕ್ಕೆ ಫಿಲ್ಮನ್ನು ಹಾಕಿ, ಚಿತ್ರವನ್ನು ನೋಡಬಹುದಾಗಿದ್ದು, ಮುಂದೆ ಇವನ್ನೇ ಪರದೆಯ ಮೇಲೆ ಚಲನಚಿತ್ರವನ್ನು ಪ್ರದರ್ಶಿಸುವಂತೆಯೂ ಸುಧಾರಿಸಲಾಯಿತು. 1912ರಲ್ಲಿ ಇವನ ಕೈನೆಟೋಪೋನ್ ವಾಕ್‍ಚಲನಚ್ಚಿತ್ರ ಉದ್ಯಮಕ್ಕೆ ಉಪಯೋಗವಾಯಿತು. 1875ರ ಡಿಸೆಂಬರ್ ತಿಂಗಳಿನ ಸೈನ್‍ಟಿಫಿಕ್ ಅಮೆರಿಕನ್ ನಿಯತಕಾಲಿಕದಲ್ಲಿ ಎಥಿರಿಕ್ ಪೋರ್ಸ್ ಎಂಬುದರ ಬಗ್ಗೆ ಒಂದು ದೊಡ್ಡ ಲೇಖನದಲ್ಲಿ ಇಂಗಾಲದ ಸ್ಥಳಗಳ ನಡುವೆ ಯಾವ ರೀತಿ ವಿದ್ಯುತ್ ಕಿಡಿಗಳು ಹಾಯುತ್ತವೆಯೆಂಬುದನ್ನು ವಿವರಿಸಿದ್ದಾನೆ.

	ಮೊದಲ ಮಹಾಯುದ್ಧದ ಕಾಲದಲ್ಲಿ ಅಮೆರಿಕದ ನೌಕಾಪಡೆಯ ಸಲಹೆಗಾರ ಸಮಿತಿಯ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿ, ಯುದ್ಧಕಾರ್ಯಕ್ಕಾಗಿ 40 ಹೊಸ ಹೊಸ ಉಪಕರಣಗಳನ್ನು ಒದಗಿಸಿಕೊಟ್ಟ. ಯುದ್ಧಾಭಿಮಾನಿಯಾದ ಈ ಸಂಶೋಧಕ 1869 ರಿಂದ 1910 ತನಕ 1,003 ಏಕಸ್ವಗಳನ್ನು ಪಡೆದ. ಇವನ ಶೋಧನೆಗಳ ಸಲುವಾಗಿ ಲಕ್ಷಾಂತರ ಮಂದಿಗೆ ಉದ್ಯೋಗ ದೊರೆತು, ಕೋಟ್ಯಂತರ ಡಾಲರುಗಳ ಲಾಭ ಗಳಿಕೆಯ ಹೊಸ ಹೊಸ ಉದ್ದಿಮೆಗಳೇ ಹುಟ್ಟಿಕೊಂಡುವು. 1927ರಲ್ಲಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‍ಗೆ ಪ್ರವೇಶ ದೊರಕಿತು. 1928ರಲ್ಲಿ ಅಮೆರಿಕದ ಸಂಸತ್ತು (ಕಾಂಗ್ರೆಸ್) ಈತನಿಗೆ ಸ್ವರ್ಣಪದಕವನ್ನಿತ್ತು ಸನ್ಮಾನಿಸಿತು. ಇವನ ಎಲ್ಲ ಶೋಧನೆಗಳು 11,599,000,000 ಡಾಲರುಗಳಷ್ಟು ಬೆಲೆಬಾಳುತ್ತವೆಂದು ಹೇಳಿ, ಇಂಗ್ಲೆಂಡ್, ಫ್ರಾನ್ಸ್, ಇಟಲಿ ಮುಂತಾದ ಯೂರೋಪಿನ ರಾಷ್ಟ್ರಗಳು ಪದವಿ ಪದಕಗಳಿಂದ ಈ ವಿಶ್ವಕರ್ಮನನ್ನು ಗೌರವಿಸಿದುವು.		   
  (ಜಿ.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ